ಖರಗ್‍ಪುರ-
	ಪಶ್ಚಿಮ ಬಂಗಾಳದ ಮೇದಿನೀಪುರ (ಮಿಡ್ನಾಪುರ) ಜಿಲ್ಲೆಯ ಅತ್ಯಂತ ದೊಡ್ಡ ನಗರ. ಕಲ್ಕತ್ತೆಯ ನೈಋತ್ಯಕ್ಕೆ 72 ಮೈ. ದೂರದಲ್ಲಿ. ಉ.ಅ. 22 20' ಮತ್ತು ಪೂ.ರೇ. 87, 21' ಮೇಲಿದೆ. ಜನಸಂಖ್ಯೆ 1,61,911 (1971). ಆಗ್ನೇಯ ರೈಲ್ವೆಜಾಲದಲ್ಲಿ ಖರಗ್‍ಪುರ ಒಂದು ಪ್ರಮುಖ ಕೂಡುನಿಲ್ದಾಣ. ಇಲ್ಲಿಂದ ಕಲ್ಕತ್ತೆಗೆ ಜೋಡಿ ವಿದ್ಯುತ್ ರೈಲುಮಾರ್ಗಗಳಿವೆ. ಮುಂಬಯಿ ಮದ್ರಾಸ್‍ಗಳಿಗೆ ರಾಷ್ಟ್ರೀಯ ಹೆದ್ದಾರಿಗಳಿವೆ.

	ಖರಗ್‍ಪುರದ ಪ್ರಾಮುಖ್ಯ ಬೆಳೆದದ್ದು ಇಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಥಾಪನೆಯಾದ (1951) ಅನಂತರ. ಕೇಂದ್ರಸರ್ಕಾರದಿಂದ ಸ್ಥಾಪಿತವಾದ ಈ ಸಂಸ್ಥೆ ಸ್ವತಂತ್ರ ವಿಶ್ವವಿದ್ಯಾಲಯದ ದರ್ಜೆಯದು. ಎಂಜಿನಿಯರಿಂಗ್ ಮತ್ತು ತಂತ್ರಶಾಸ್ತ್ರದಲ್ಲಿ ತಜ್ಞರನ್ನು ನಿರ್ಮಾಣಮಾಡಲು ಭಾರತ ಸರ್ಕಾರ ಪ್ರಾರಂಭಿಸಿದ ಐದು ತಂತ್ರಶಾಸ್ತ್ರ ವಿದ್ಯಾಲಯಗಳಲ್ಲಿ ಮೊದಲನೆಯದು. ಈ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಮತ್ತು ತಂತ್ರಶಾಸ್ತ್ರದಲ್ಲಿ, ಶುದ್ಧ ಮತ್ತು ಅನ್ವಯ ವಿಜ್ಞಾನಗಳಲ್ಲಿ ಪದವಿಗಳನ್ನು ನೀಡಲಾಗುತ್ತಿದೆ. ಎಂಜಿನಿಯರಿಂಗ್ ಕಾಲೇಜು ಮತ್ತು ಇನ್ಸ್ಟಿಟ್ಯೂಟ್‍ಗಳ ಅಧ್ಯಾಪಕರುಗಳಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ ಭಾರತದ ವಿವಿಧ ಪ್ರಾಂತ್ಯಗಳ ವಿದ್ಯಾರ್ಥಿಗಳಲ್ಲವೆ ವಿದೇಶೀಯ ವಿದ್ಯಾರ್ಥಿಗಳೂ ಅಧ್ಯಯನ ನಡೆಸುತ್ತಿದ್ದಾರೆ. ಸುಮಾರು 2500 ವಿದ್ಯಾರ್ಥಿಗಳಿದ್ದಾರೆ. ಇದಲ್ಲದೆ ಖರಗ್‍ಪುರದಲ್ಲಿ ಅನೇಕ ತಾಂತ್ರಿಕ ಹಾಗೂ ಇತರ ಶಿಕ್ಷಣ ಸಂಸ್ಥೆಗಳಿವೆ. ಖರಗ್‍ಪುರ ರೈಲ್ವೆ ವರ್ಕ್‍ಷಾಪ್ ಬಹಳ ದೊಡ್ಡದು. ನಗರದ ಕಾರ್ಮಿಕರಲ್ಲಿ ಹೆಚ್ಚು ಮಂದಿ ವರ್ಕ್‍ಷಾಪಿನ ಉದ್ಯೋಗಸ್ಥರು. ಖರಗ್‍ಪುರದಲ್ಲಿ ಸಂತ ಪೀರ್ ಲೋಹಾನಿಯ ಸ್ಮಾರಕವಿದೆ. ಹಿಂದೂ ಮುಸ್ಲಿಮರಿಬ್ಬರೂ ಇದಕ್ಕೆ ನಡೆದುಕೊಳ್ಳುತ್ತಾರೆ.

	ಬಿಹಾರದ ಮೊಂಘೈರ್ ಜಿಲ್ಲೆಯಲ್ಲೂ ಖರಗ್‍ಪುರ ಎಂಬ ಹೆಸರಿನ ಒಂದು ಪಟ್ಟಣವಿದೆ. ಜನಸಂಖ್ಯೆ 12,369 (1971). ಇದರ ಸುತ್ತಣ ಪ್ರದೇಶದಲ್ಲಿ ಸ್ಫಟಿಕಶಿಲೆ ಸಿಗುತ್ತದೆ. 			 		(ಜೆ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ